ಲಸಿಕೆ ಪಡೆದ ಬಳಿಕ ಮೂರು ತಿಂಗಳ ಮಗು ಸಾವು, ಲಸಿಕೆ ಬದಲಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟ ಆರೋಪ | ಜನತಾ ನ್ಯೂಸ್
ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಆರೋಗ್ಯದಿಂದ ಇದ್ದ ಮೂರು ತಿಂಗಳ ಮಗು ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಲಸಿಕೆ ಪಡೆದ ಬಳಿಕ 3 ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಗರಾಜ್, ಅಂಜಲಿ ದಂಪತಿ ಮಗು ಮೃತಪಟ್ಟಿದೆ.
ನಿನ್ನೆ ಗ್ರಾಮದ ಜನರಿಗೆ ಕೊವಿಡ್ ಲಸಿಕೆ ನೀಡಿದ್ದರು. ಇದೇ ವೇಳೆ 3 ತಿಂಗಳ ಮಕ್ಕಳಿಗೂ ಪೆಂಟಾವಲೆಂಟ್ (pentavalent vaccine) ಲಸಿಕೆಯನ್ನೂ ಹಾಕಲಾಗಿತ್ತು. ಈ ವೇಳೆ ಆರೋಗ್ಯ ಅಧಿಕಾರಿಗಳು ಮಗುವಿಗೆ 3 ತಿಂಗಳ ಲಸಿಕೆ ಬದಲು ಕೊವಿಡ್ ಲಸಿಕೆ ಹಾಕಿ ಎಡವಟ್ಟು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಪುಟ್ಟ ಮಗುವಿಗೆ ಕೊವಿಡ್ ಲಸಿಕೆಯನ್ನು ನೀಡಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದಾರೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.