ಕೊರೊನಾ ಸ್ಫೋಟ: ಮಂಡ್ಯದ ಗ್ರಾಮವೊಂದರಲ್ಲಿ 35 ಜನರಿಗೆ ಕೊರೊನಾ | ಜನತಾ ನ್ಯೂಸ್
ಮಂಡ್ಯ : ಒಂದೇ ಗ್ರಾಮದ 35 ಜನರಿಗೆ ಕೊರೊನಾ ಪಾಸಿಟಿವ್ ತಗುಲಿದ್ದು ಪಾಂಡುಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ 35 ಜನರಲ್ಲಿ ಕೊರೊನಾ ಸೋಂಕು ತಗುಲಿವುದು ತಿಳಿದುಬಂದಿದ್ದು ಗ್ರಾಮವನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದೆ.
ದೊಡ್ಡಬ್ಯಾಡರಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸೇರಿದ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ , ಕೊರೊನಾ ನಿಯಮ ಉಲ್ಲಂಘಿಸಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ಬಳಿಕ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅಂತ್ಯ ಸಂಸ್ಕಾರದ ಸಮಯದಲ್ಲೇ ಕೊರೊನಾ ಹರಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ವಿಷಯ ತಿಳಿದ ಶಾಸಕ ಸಿ.ಎಸ್.ಪುಟ್ಟರಾಜು, ತಹಶೀಲ್ದಾರ್ ಪ್ರಮೋದ್ ಪಾಟೀಲ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎ ಅರವಿಂದ್ ಅವರಿಗೆ ಸೂಚಿಸಿ ಗ್ರಾಮದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿ ಮುಂಜಾಗೃತ ಕ್ರಮಗಳನ್ನು ಜರುಗಿಸಿ ಎಂದು ಸೂಚಿಸಿದ್ದರು.
ಗ್ರಾಮ ಒಟ್ಟು 650ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಎರಡು ದಿನದಲ್ಲಿ 35 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. 319 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇನ್ನುಳಿದ ಗ್ರಾಮಸ್ಥರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಗ್ರಾಮದಲ್ಲಿ 184 ಮಂದಿಗೆ ಮೊದಲನೇ ಡೋಸ್ ಲಸಿಕೆ ಹಾಕಲಾಗಿದೆ. 55 ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಇನ್ನೂ ಅನೇಕರಿಗೆ ಲಸಿಕೆ ಹಾಕಬೇಕಾಗಿದೆ ಎನ್ನಲಾಗಿದೆ.