ಯುಪಿಎ ಸರಕಾರ ಇದ್ದಿದ್ದರೆ ತಾಲಿಬಾನಿಗಳನ್ನು ದೇಶಕ್ಕೆ ಕರೆತರುತ್ತಿತ್ತು | ಜನತಾ ನ್ಯೂಸ್
ಮಂಡ್ಯ : ಇಂದು ದೇಶದಲ್ಲಿ ಯುಪಿಎ ಸರಕಾರವಿದ್ದಿದ್ದರೆ ಆಫ್ಘಾನಿಸ್ತಾನದಿಂದ ತಾಲಿಬಾನಿಗಳನ್ನು ಕರೆತಂದು ಒಂದು ರಾಜಧಾನಿ ನಿರ್ಮಿಸಿಕೊಡುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಟೀಕಿಸಿದ್ದಾರೆ.
ನಗರದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಲೋಕಸಭೆ ನಿಲ್ಲಿಸುವ ಷಡ್ಯಂತ್ರ ಕಾಂಗ್ರೆಸ್‌ನವರದ್ದು ಹಾಗೂ ವಿರೋಧ ಪಕ್ಷವಾಗಿ ಜವಾಬ್ದಾರಿಯುತ ನೆಲೆ ತೋರಲಿಲ್ಲ ಎಂದು ಕಿಡಿಕಾರಿದ್ದಾರೆ.
ಚೀನಾ, ಪಾಕಿಸ್ತಾನಕ್ಕೆ ಬೆಂಬಲ ಕೊಡುವಂತದ್ದನ್ನ ಕಾಂಗ್ರೆಸ್ ನವರು ಮಾಡುತ್ತಾರೆ. ಕಾಶ್ಮೀರ ಪ್ರತ್ಯೇಕ ಎಂಬ ಹೇಳಿಕೆಯನ್ನು ಪಂಜಾಬ್ ಕಾಂಗ್ರೆಸ್ ನ ಪ್ರಮುಖರು ನೀಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದೆ. ಹೀಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಗಳ ಪ್ರಾರಂಭವಾಗಿದೆ. ಮುಂದೆ ಯಾರು ಸಿಎಂ ಎನ್ನುವ ವಿಚಾರದಲ್ಲಿ ಜಗಳವಾಡುತ್ತಾ, ರಾಜ್ಯದ ಪದಾಧಿಕಾರಿಗಳ ಆಯ್ಕೆಯನ್ನೇ ಕಾಂಗ್ರೆಸ್ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ನಡೆದಿದೆ. ಬಿಜೆಪಿ ಪರವಾದ ವಾತಾವರಣ ಮಂಡ್ಯದಲ್ಲಿದೆ. ಎಲ್ಲ ನಾಯಕರ ಜತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪಕ್ಷದ ಸಂಘಟನೆಗೂ ಒತ್ತು ನೀಡಲಾಗಿದೆ. ಇದರಿಂದ ಮುಂದಿನ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್) ಆರಂಭಿಸಲು ಕ್ರಮವಹಿಸಲಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.