ಹಲ್ಲಿಗೆ ಕ್ಲಿಪ್ ಹಾಕಿಸಲು ಆಸ್ಪತ್ರೆಗೆ ಹೋದ ಯುವಕ ಸಾವು! | ಜನತಾ ನ್ಯೂಸ್
ಕಲಬುರಗಿ : ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಳ್ಳಲೆಂದು ಆಸ್ಪತ್ರೆಗೆ ಬಂದ ಯುವಕನೊಬ್ಬ ಮೃತಪಟ್ಟ ಘಟನೆ ಕಲಬುರಗಿ ನಗರದಲ್ಲಿ ಸಂಭವಿಸಿದೆ.
ಕಲಬುರಗಿಯ ಆನಂದ ನಗರದ ನಿವಾಸಿ ಶಶಾಂಕ್(18) ಮೃತ ದುರ್ದೈವಿ. ಈತ ಹಲ್ಲಿಗೆ ಕ್ಲಿಪ್ ಹಾಕಿಸಿಕೊಳ್ಳಲು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ಹೋದಾಗ ಆತನಿಗೆ ವೈದ್ಯರು ಆಪರೇಷನ್ ಮೊದಲು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಪರಿಣಾಮ ಯುವಕ ಪ್ರಜ್ಞಾಹೀನನಾಗಿದ್ದು, ಆತ ಕಳೆದ ಮೂರು ದಿನಗಳಿಂದ ಕೋಮಾಕ್ಕೆ ಜಾರಿದ್ದನು.
ಮೂರು ದಿನವಾದರೂ ಪ್ರಜ್ಞೆ ಬರಲೇ ಇಲ್ಲ. ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಶಶಾಂಕ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಪ್ರತಿಭಟನೆ ನಡೆಸಿದರು.
ಪೋಲಿಸರು ಮಧ್ಯ ಪ್ರವೇಶಿಸಿ ಮೃತ ಯುವಕನ ಶರೀರವನ್ನು ಶವ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.