ಈಶ್ವರಪ್ಪ ಬಂಧನವಾಗಬೇಕು, ಅಲ್ಲಿವರೆಗೂ ಅಂತ್ಯಕ್ರಿಯೆ ಮಾಡಲ್ಲ: ಸಂತೋಷ್ ಪಾಟೀಲ್ ಸಹೋದರ | JANATA NEWS
ಬೆಳಗಾವಿ : ಸಂತೋಷ್ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ನೇರ ಕಾರಣ. ಅವರನ್ನು ಕೂಡಲೇ ಬಂಧಿಸಬೇಕು. ಅಲ್ಲಿಯವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಸಹೋದರ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.
ಪ್ರಶಾಂತ ಪಾಟೀಲ್ ಮಾತನಾಡಿ, ಸಚಿವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ತನ್ನ ಸಹೋದರ 4 ಕೋಟಿ ರೂ. ಕೆಲಸ ಮಾಡಿದ್ದ. ಇಲ್ಲಿಯವರೆಗೂ ಒಂದು ರೂಪಾಯಿಯೂ ಬಂದಿಲ್ಲ. ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಈಶ್ವರಪ್ಪ 40% ಕಮಿಷನ್ ಕೇಳಿದ್ದಾರೆ. ಜೀವ ಬೇದರಿಕೆ ಸಹ ಹಾಕಿದ್ದರು. ನನ್ನ ತಮ್ಮನ ಸಾವಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಕಣ್ಣೀರು ಹಾಕಿದರು.
ಬೆಳಗಾವಿಯ ಸಮರ್ಥ ಕಾಲನಿಯಲ್ಲಿ ವಾಸವಾಗಿದ್ದ ಸಂತೋಷ್ ಪಾಟೀಲ್ 4 ಕೋಟಿ ರೂ. ಸಾಲ ಮಾಡಿ ಗುತ್ತಿಗೆದಾರನಾಗಿ ಹಿಂಡಲಗಾ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿ ನಡೆಸಿದ್ದರು. ಇಲಾಖೆಯ ಸಂಬಂಧಿತ ಅಧಿಕಾರಿಗಳ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗಿದೆ ಎಂಬ ಕಾರಣ ನೀಡಿ ಕಾಮಗಾರಿಯ ಬಿಲ್ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂತೋಷ್ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಿಗೂ ಪತ್ರ ಬರೆದು, ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.
ಸಚಿವ ಈಶ್ವರಪ್ಪ ಅವರನ್ನು ಅನೇಕ ಸಲ ಭೇಟಿಯಾಗಿದ್ದ. ಅಂತಿಮ ಸಂಸ್ಕಾರಕ್ಕಾಗಿ ಮೃತದೇಹವನ್ನು ಬೆಳಗಾವಿ ತಾಲೂಕಿನ ಬಡಸ್ ಗ್ರಾಮಕ್ಕೆ ತರಲಾಗುತ್ತಿದೆ , ಈಶ್ವರಪ್ಪ ಅರೆಸ್ಟ್ ಆಗುವವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದರು.