ಪ್ರತಿ ತಿಂಗಳೂ ರಾಜ್ಯಕ್ಕೆ ಬರುತ್ತೇನೆ: ಮಂಗಳೂರು ಹೆಲಿಪ್ಯಾಡ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ | JANATA NEWS
ಮಂಗಳೂರು : ಇಂದು ಮಧ್ಯಾಹ್ನ ಮಂಗಳೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಒಟ್ಟು 3,700 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಮಂಗಳೂರು ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಸಂಜೆಯ ವೇಳೆಗೆ ಪ್ರಧಾನಿ ಮೋದಿ ದೆಹಲಿಗೆ ವಾಪಸಾದರು. ವಾಪಸಾಗುವ ಮುನ್ನ ಮಂಗಳೂರಿನ ಎನ್ಎಂಪಿಎ ಹೆಲಿಪ್ಯಾಡ್ ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು.
ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಬಿಜೆಪಿ ನಾಯಕರ ಜೊತೆ ಆಪ್ತ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಇನ್ನು ಮುಂದೆ ಪ್ರತಿ ತಿಂಗಳೂ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಪಕ್ಷದ ನಾಯಕರುಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಪರ ಒಲವು ಇದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಪಕ್ಷದ ರೀತಿ ರಿವಾಜುಗಳನ್ನು ನಡ್ಡಾ ನೋಡಿಕೊಳ್ಳುತ್ತಾರೆ. ನೀವು ಜನರನ್ನು ತಲುಪಿ. ನಾನು ರಾಜ್ಯಕ್ಕೆ ಬರುತ್ತೇನೆ, ನನ್ನ ಸಹಕಾರ ಇದ್ದೇ ಇದೆ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.