ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ | JANATA NEWS
ಚಿಕ್ಕಬಳ್ಳಾಪುರ : ಕೆರೆಯ ಬಳಿ ರೀಲ್ಸ್ ಮಾಡಲು ಹೋದ ಯುವತಿ ಕೆರೆಗೆ ಉರುಳಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ನಡೆದಿದೆ.
ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದವಳು.
ಎಂಎ ಪದವೀಧರೆ ಆಗಿರುವ ಈಕೆ ಚಿಕ್ಕಬಳ್ಳಾಪುರದ ಜಂಬಿಗೆಮರದಹಳ್ಳಿಯ ನೆಂಟರ ಗೃಹಪ್ರವೇಶಕ್ಕಾಗಿ ಬಂದಿದ್ದಳು. ಅಲ್ಲಿ ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಮತ್ತೊಬ್ಬಳು ಯುವತಿ ಜೊತೆ ಅಲ್ಲಿಗೆ ತೆರಳಿದ್ದಳು.
ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವೀಡಿಯೋ ಮಾಡಲು ಹೇಳಿ ಮೊಬೈಲ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಆದರೆ ಈ ವೇಳೆ ಆಕಸ್ಮಿಕ ಕಾಲು ಜಾರಿ ಕೆರೆಗೆ ಅಮೃತಾ ಉರುಳಿಬಿದ್ದು ಸಾವನ್ನಪ್ಪಿದ್ದಾಳೆ. ಗೆಳತಿ ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು, ಅರ್ಧ ಗಂಟೆಯಲ್ಲೇ ಕೆರೆಯಿಂದ ಮೃತ ಅಮೃತಳನ್ನ ಸ್ಥಳೀಯರೇ ಮೇಲೆ ಎತ್ತಿದ್ದಾರೆ.
ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.