ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ | JANATA NEWS
ಹುಬ್ಬಳ್ಳಿ : ನಕಲಿ ಗಾಂಧಿ ಪರಿವಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಒಂದು ಅಪಹಾಸ್ಯ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಗಾಂಧಿ ಜಯಂತಿ ಅಂಗವಾಗಿ ಕಿಮ್ಸ್ ಆವರಣ ಮುಂಭಾಗದಲ್ಲಿ ಮಹಾತ್ಮಗಾಂಧಿ ಮೂರ್ತಿಗೆ ಪ್ರಹ್ಲಾದ್ ಜೋಶಿ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿ ರಾಹುಲ್ ಗಾಂಧಿ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ ಪರ ಇದ್ದಾರೆ ಎಂಬುದನ್ನು ತಮ್ಮ ತೀರ್ಮಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ 10 ವರ್ಷ ನಿರಂತರವಾಗಿ ಭ್ರಷ್ಟಾಚಾರ ಹಗರಣದ್ದೆ ಸುದ್ದಿ ಇತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂಬ ರಾಹುಲ್ ಗಾಂಧಿ ಮಾತಿಗೆ ಪ್ರತಿಕ್ರಿಯೆ ನೀಡಿದ ಸಚಿವ ಜೋಶಿ ಅವರು, ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬುದರ ಬಗ್ಗೆ ಅಂಕಿ ಅಂಶಗಳಿವೆ. ಕೊರೊನಾ ಸಮಯದಂತಹ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಆಗಿದೆ. ಹೀಗಾಗಿ ಭಾರತದ ಹಿರಿಮೆ ಗರಿಮೆ ಬಗ್ಗೆ ಸುಳ್ಳು ಅಪಪ್ರಚಾರ ಮಾಡಬಾರದು ಎಂದು ಕಿವಿಮಾತು ಹೇಳಿದರು.