ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ನೆಪದಲ್ಲಿ ನ್ಯಾಯಾಧಿಕರಣ ರಚಿಸಲು ಕೇಂದ್ರ ಹುನ್ನಾರ | JANATA NEWS
ಬೆಂಗಳೂರು : ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ಕನ್ನಡಿಗರ ಹಕ್ಕು ಕಸಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ.
ಇದನ್ನು ರಾಜ್ಯ ಬಿಜೆಪಿ ಸರ್ಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ನರೇಂದ್ರ ಮೋದಿ ಸರಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಆಗಲೇ, ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ ಎಂದಿದ್ದಾರೆ.
ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲ ವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ತಳ್ಳಿ ಕನ್ನಡಿಗರನ್ನು ಕಾಡುವ ಹವಣಿಕೆ ಇದಷ್ಟೇ.
ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ. ಇದನ್ನು ರಾಜ್ಯ ಸರ್ಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ನೆಲ, ಜಲ, ಭಾಷೆಯಂತಹ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣ ರಾಜ್ಯಗಳ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರವು ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.