ವಿದ್ಯುತ್ ತಂತಿ ತುಳಿದು ತಾಯಿ- ಮಗಳು ಸಾವು: 5 ಬೆಸ್ಕಾಂ ಅಧಿಕಾರಿಗಳ ಅಮಾನತು | JANATA NEWS
ಬೆಂಗಳೂರು : ಬೆಸ್ಕಾಂ ವೈಟ್ ಫೀಲ್ಡ್ ವಿಭಾಗ ವ್ತಾಪ್ತಿಯ ಕಾಡುಗೋಡಿಯ 4 ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್ ಫಾರ್ಮ್ ಸಿಗ್ನಲ್ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಮೃತ ಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ಭಾನುವಾರ ಬೆಳಗ್ಗೆ 5.30 ರ ಸಮಯದಲ್ಲಿ ಸೌಂದರ್ಯ ( 23 ) ಅವರ ಮಗಳು ಲೀಲಾ ಅವರು ಆಕಸ್ಮಿಕವಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತ ಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂಧನ ಸಚಿವ ಕೆ,ಜೆ, ಜಾರ್ಜ್ ಅವರ ಸೂಚನೆ ಮೇರೆಗೆ 4ನೇ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಬ್ರಮಣ್ಯ ಟಿ , ಸಹಾಯಕ ಇಂಜಿನಿಯರ್ ಚೇತನ್ ಎಸ್ , ಕಿರಿಯ ಇಂಜಿನಿಯರ್ ರಾಜಣ್ಣ , ಕಿರಿಯ ಪವರ್ ಮನ್ ಮಂಜುನಾಥ್ ರೇವಣ್ಣ ಹಾಗೂ ಲೈನ್ ಮನ್ ಬಸವರಾಜು ಅವರನ್ನು ಅಮಾನತುಗೊಳಿಸಿ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ವಿಸೃತ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.
ಅದೇ ರೀತಿ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಪೂರ್ವ ವೃತ್ತದ ಅಧೀಕ್ಷಕ ಇಂಜಿನಿಯರ್ ಲೋಕೇಶ್ ಬಾಬು ಎಂ ಹಾಗೂ ಬೆಸ್ಕಾಂ ವೈಟ್ ಫೀಲ್ಡ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಶ್ರೀರಾಮು ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.
ಘಟನೆ ವಿವರ: ಕಾಡುಗೋಡಿಯ ಎಫ್ ೯ ಬಿಪಿಎಲ್ ಫೀಡರ್ ಬೆಳಗ್ಗೆ 3.50ಕ್ಕೆ ಟ್ರಿಪ್ ಆಗಿತ್ತು. ಪುನ: 3.55 ಕ್ಕೆ ಲೈನ್ ಚಾರ್ಜ್ ಆಗಿರುವುದು ದಾಖಲಾಗಿರುತ್ತದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಈ ತುಂಡಾದ ತಂತಿ ತುಳಿದು ತಾಯಿ ಮಗಳು ಮೃತ ಪಟ್ಟಿರುತ್ತಾರೆ.
ಬೆಸ್ಕಾಂ ಅಧಿಕಾರಿಗಳ ಈ ಕರ್ತವ್ಯಲೋಪವನ್ನು ಇಂಧನ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಇಂಜಿನಿಯರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.