ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ - ಖರ್ಗೆ ರನ್ನು ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ | JANATA NEWS

ನವದೆಹಲಿ : ಸಮಸ್ಯೆ ಹೇಳಿಕೊಂಡು ಬಂದ ರೈತನ ವಿರುದ್ಧ ಕಾಂಗ್ರೆಸ್ ಪಕ್ಷದ(ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗದರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ರೈತರ ವಿರುದ್ಧ ಖರ್ಗೆಯವರ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಘಟನೆಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಾಂಗ್ರೆಸ್ ನ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಖರ್ಗೆ ಅವರನ್ನು ಉದ್ದೇಶಿಸಿ ಬುದ್ಧಿವಾದ ನೀಡಿದ್ದು,
"ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ, ರೈತರ ಬಗ್ಗೆ ನಿಮ್ಮ ನಡವಳಿಕೆ ಕಂಡು ಬಹಳ ಬೇಸರವಾಯಿತು. ನಿಮ್ಮಂತಹ ಹಿರಿಯರಿಂದ ಇಂಥ ವರ್ತನೆಯನ್ನು ನಾನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ಕಷ್ಟದಲ್ಲಿರುವ ರೈತ ನಿಮ್ಮಂಥವರ ಬಳಿ ಬಂದು ದುಃಖ ತೋಡಿಕೊಳ್ಳದೆ ಇನ್ನು ಯಾರ ಬಳಿ ಹೋಗಿ ಹೇಳಿಕೊಳ್ಳಬೇಕು?"
"ನೀವು ರಾಜ್ಯಸಭೆ ಪ್ರತಿಪಕ್ಷ ನಾಯಕರು ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರು. ಇದೆಲ್ಲವನ್ನೂ ತಾವು ಮರೆತು ಮಾತನಾಡಿದ್ದೀರಿ! ಇದು ತಮಗೆ ಭೂಷಣವಲ್ಲ. ದುಃಖ ಹೇಳಿಕೊಳ್ಳಲು ಬಂದ ರೈತನ ಮೇಲೆ ಈ ಪರಿಯ ದರ್ಪ ಅಗತ್ಯವಿರಲಿಲ್ಲ. ನೀವೂ ತೊಗರಿ ರೈತರೇ ಆಗಿರಬಹುದು. ಆದರೆ 40 ಎಕರೆಯಲ್ಲಿ ಬೆಳೆಯುವ ತಮಗೂ, ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆಯುವ ಆ ಬಡರೈತನಿಗೂ ಹೋಲಿಕೆಯೇ? ನಷ್ಟವನ್ನು ಭರಿಸುವ ಶಕ್ತಿ ನಿಮಗಿರುತ್ತದೆ, ರೈತನಿಗೆ ಆ ಶಕ್ತಿ ಇರಬೇಕಲ್ಲವೇ?"
"ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯ? ತೊಗರಿ ಅಷ್ಟೆ ಅಲ್ಲ; ಉದ್ದು, ಹೆಸರು ಕೂಡ ಹಾಳಾಗಿರುವುದು ನನಗೆ ಗೊತ್ತಿದೆ. ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು.."
"ಹೀಗೆಂದರೇನು ಖರ್ಗೆಯವರೇ? ಹಿರಿಯರು ತಾವೇ ಹೇಳಬೇಕು. ರೈತನನ್ನು ಅಪಮಾನಿಸಿದ್ದೀರಿ. ಜತೆಗೆ, ತಾಯಿಯನ್ನು ಅಪಮಾನಿಸಿದ್ದೀರಿ! ಇದು ಸರಿಯಲ್ಲ. ಕೊನೇಪಕ್ಷ ಆ ವ್ಯಕ್ತಿಗೆ ಸಾಂತ್ವನ ಹೇಳಿ, ಆತನ ಕಣ್ಣೀರು ಒರೆಸಬಹುದಿತ್ತು."
"ನಿಮ್ಮ ನಡವಳಿಕೆಯು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ದುರಹಂಕಾರ ಮತ್ತು ಅಹಂಕಾರಕ್ಕೆ ಸಾಕ್ಷಿಯಾಗಿದೆ" ಎಂದು ಎಚ್‌ಡಿ ಕುಮಾರಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಲಬುರಗಿಯ ತಮ್ಮ ನಿವಾಸದಲ್ಲಿ ಖರ್ಗೆ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ರೈತರೊಬ್ಬರು (Farmer) ಬಂದು ಸರ್ ತೊಗರಿ ಬೆಳೆ ಹಾನಿಯಾಗಿದೆ. ನಷ್ಟ ಉಂಟಾಗಿದೆ ಎಂದು ಅಳಲುತೊಡಿಕೊಂಡಿದ್ದಾರೆ. ಈ ವೇಳೆ, ಗರಂ ಆದ ಖರ್ಗೆ, ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯಾ? ತೊಗರಿ ಅಷ್ಟೆ ಅಲ್ಲ, ಉದ್ದು, ಹೆಸರು ಕೂಡ ಹಾಳಾಗಿದ್ದು ನನಗೆ ಗೊತ್ತಿದೆ. 6 ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು, ಎಂದು ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ, "ಹೋಗಿ ಮೋದಿ, ಶಾ ಗೆ ಕೇಳಿ" ಅಂತ ಹೇಳಿದ್ದಾರೆ. ಸಮಸ್ಯೆ ಹೇಳಿಕೊಂಡು ಬಂದ ರೈತರೊಂದಿಗೆ ಖರ್ಗೆ ನಡೆದುಕೊಂಡ ರೀತಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.