ತಮ್ಮ ಭಾಷಣದ ಮಧ್ಯೆ ಹೊರಹೋಗುತ್ತಿದ್ದ ಜನರಿಗೆ ಗದರಿಸಿದ ಸಿಎಂ ಸಿದ್ದರಾಮಯ್ಯ : ಹೊರ ಬಿಡದಂತೆ ಪೊಲೀಸರಿಗೆ ಆದೇಶ | JANATA NEWS

ಮೈಸೂರು : ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ನವರು ತಮ್ಮ ಭಾಷಣದ ಮಧ್ಯೆ ಜನ ಎದ್ದು ಕಾರ್ಯಕ್ರಮದಿಂದ ಹೊರಗಡೆ ಹೋಗುತ್ತಿರುವುದನ್ನು ಕಂಡು ಅತೀವ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಜನರು ತೋರಿದ ಈ ಅಗೌರವದಿಂದ ಕೋಪಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇಷ್ಟಕ್ಕೆ ಸುಮ್ಮನಾಗದೆ, "ಅದು ಹೇಯ್ .. ಅದ್ಯಾವನೋ ಅದು .. ಒಂದು ಅರ್ಧ ಗಂಟೆ ಕಾರ್ಯಕ್ರಮ ಮುಗಿಯುವವರೆಗೂ ಕುಳಿತುಕೊಳ್ಳಲು ಆಗುವುದಿಲ್ಲವೋ.. ಇನ್ ಸ್ವಲ್ಪ ಇನ್ನು ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗುವುದಿಲ್ಲವೇ?.. ಹೇಯ್ .. ಯಾಕೆ ಬರುತ್ತೀರಿ, ಮನೇಲಿ ಇರಬೇಕಾಗಿತ್ತು", ಎಂದು ಗದರಿದ್ದಾರೆ.
ಅಷ್ಟೇ ಅಲ್ಲದೇ, ಪೊಲೀಸರನ್ನು ಕುರಿತು ಆದೇಶಿಸಿದ ಸಿಎಂ ಸಿದ್ದರಾಮಯ್ಯ ಅವರು, "ಪೊಲೀಸರೇ ಬಿಡಬೇಡಿ ಯಾರನ್ನು ವಾಪಸ್ ಕಳಿಸಿ", ಎಂದು ಮೈಕ್ ನಲ್ಲಿಯೇ ಗದರಿಸುವ ಮೂಲಕ ಕಾರ್ಯಕ್ರಮದ ಮಧ್ಯೆ ಎದ್ದು ಹೊರ ಹೋಗುತ್ತಿದ್ದ ಜನರನ್ನು ತಡೆದು ಪುನಃ ಕಾರ್ಯಕ್ರಮದಲ್ಲೇ ಬಲವಂತವಾಗಿ ಉಳಿಸಿಕೊಳ್ಳಲು ಮುಂದಾದರು.
ಇದಕ್ಕೂ ಮುನ್ನ, ಹಲವು ದಿನಗಳ ಗೊಂದಲ, ಟೀಕೆ,ವಿವಾದಗಳ ಬಳಿಕ ಇಂದು ಮೈಸೂರು ದಸರಾ ಕಾರ್ಯಕ್ರಮವನ್ನು ಸಾಹಿತಿ ಬಾನು ಮುಷ್ತಾಕ್ ಅವರು ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪ ನಮನದ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಸ್ಥಿತರಿದ್ದರು.