ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ದರ್ಶನ್ ಆಕ್ರೋಶ | Filmz news
: ಮಾಗಡಿ ರಸ್ತೆಯ ಟೋಲ್ಗೇಟ್ ಬಳಿ ಪ್ರತಿಷ್ಠಾಪಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಮಧ್ಯರಾತ್ರಿ ಧ್ವಂಸಗೊಳಿಸಿದ್ದಕ್ಕೆ ಅವರ ಅಭಿಮಾನಿಗಳು ಸಿಡಿದೆದ್ದಿದ್ದಾರೆ.
ಇದಕ್ಕೆ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ತಮ್ಮ ಅಭಿಪ್ರಾಯವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸುವ, ಆರಾಧಿಸುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಷ್ಣು ಸರ್ ಪುತ್ಥಳಿ ಧ್ವಂಸಗೊಳಿಸಿದ್ದಾರೆ. ಯಾರೂ ಇಲ್ಲದ ವೇಳೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ. ಇಂಥ ದುಷ್ಕರ್ಮಿಗಳಿಗೆ ತಕ್ಷಣ ಶಿಕ್ಷೆ ಆಗಲೇಬೇಕು ಎಂದು ಟ್ವೀಟ್ ಮಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷ್ಣು ಅವರ ಅಳಿಯ ಅನಿರುದ್ಧ್ ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಘಟನೆಗಳು ಮರುಕಳಿಸಬಾರದು. ಈ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು. ವಿಷ್ಣುವರ್ಧನ್ ತೋರುತ್ತಿದ್ದ ಪ್ರೀತಿಯ ಕಾರಣಕ್ಕೆ ಅವರು ಇನ್ನೂ ಕೋಟ್ಯಂತರ ಅಭಿಮಾನಿಗಳ ಮನಸು-ಹೃದಯದಲ್ಲಿ ನೆಲೆಸಿದ್ದಾರೆ. ಅಭಿಮಾನಿಗಳು ಕೂಡ ಪ್ರೀತಿಯಿಂದ ನಡೆದುಕೊಳ್ಳಬೇಕು, ದ್ವೇಷ ಬೇಡ. ಇನ್ನು ಬೇರೆ ಕಡೆಯಲ್ಲಿ ಪುತ್ಥಳಿ ಸ್ಥಾಪನೆ ಬಗ್ಗೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅದರಂತೆ ಒಂದೊಳ್ಳೆಯ ಜಾಗದಲ್ಲಿ ಅದ್ದೂರಿಯಾಗಿಯೇ ಪುತ್ಥಳಿ ನಿರ್ಮಾಣವಾಗಲಿದೆ. ಆ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿವೆ ಎಂದು ಅನಿರುದ್ಧ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.
— Darshan Thoogudeepa (@dasadarshan) December 26, 2020
ನಿಮ್ಮ ದಾಸ ದರ್ಶನ್ pic.twitter.com/eJ5nGFd6oa