ಕಾಸ್ಮೆಟಿಕ್ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! | Filmz news
: ಕಾಸ್ಮೆಟಿಕ್ ಸರ್ಜರಿಗೆ ಎಂದು ಆಸ್ಪತ್ರೆಗೆ ಹೋದ ಕನ್ನಡದ ಕಿರುತೆರೆಯ ಯುವ ನಟಿ ಚೇತನಾ ರಾಜ್ ಆಪರೇಷನ್ ವೇಳೆಯೇ ದುರಂತ ಅಂತ್ಯಕಂಡಿದ್ದಾರೆ.
ಕನ್ನಡ ಕಿರುತೆರೆ ಲೋಕದ ಯುವ ನಟಿ ಚೇತನಾ ರಾಜ್ ಇಂದು ಸಾವನ್ನಪ್ಪಿದ್ದಾರೆ. 21 ವರ್ಷದ ಚೇತನಾ ರಾಜ್, ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಎಂಬ ಸೀರಿಯಲ್ಗಳಲ್ಲಿ ಚೇತನಾ ರಾಜ್ ನಟಿಸಿದ್ದರು.
ಮನೆಯವರಿಗೂ ತಿಳಿಸದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಸೋಮವಾರ ಬೆಳಗ್ಗೆ ನವರಂಗ್ನ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಫ್ಯಾಟ್ ಬರ್ನಿಂಗ್ ಆಪರೇಷನ್ಗೆ 1.60 ಲಕ್ಷ ರೂ. ಶುಲ್ಕ ಪಾವತಿಸುವಂತೆ ಆಸ್ಪತ್ರೆಯವರು ಹೇಳಿದ್ದರಂತೆ. ಆಪರೇಷನ್ಗೂ ಮೊದಲು ನಟಿ ಚೇತನಾ ರಾಜ್ 92 ಸಾವಿರ ಹಣ ಕಟ್ಟಿದ್ದರಂತೆ.
ಆಪರೇಷನ್ ಮಾಡುವಾಗ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಐಸಿಯು ಸೌಲಭ್ಯ ಇರಲಿಲ್ಲ. ಕೂಡಲೇ ಕಾಡೆ ಹಾಸ್ಪಿಟಲ್ಗೆ ನಟಿಯನ್ನು ಸ್ಥಳಾಂತರಿಸಲಾಗಿತ್ತು. ಡಾ.ಸಾಹೇಬ್ ಗೌಡ ಆಯಂಡ್ ಟೀಂ ನಟಿಗೆ ಆಪರೇಷನ್ ಮಾಡಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು ಮಾತ್ರವಲ್ಲ, ಕಾರ್ಡಿಯಾಕ್ ಅರೆಸ್ಟ್ ಕೂಡ ಆಗಿದೆ. ಮಾರ್ಗಮಧ್ಯೆಯೇ ನಟಿಯ ಪಲ್ಸ್ ರೇಟ್ ಕಡಿಮೆಯಾಗಿ ಮೃತಪಟ್ಟಿದ್ದಾರೆ.
ಈ ಸುದ್ದಿ ಕನ್ನಡ ಕಿರುತೆರೆ ಲೋಕಕ್ಕೆ ಬಹಳ ನೋವುಂಟು ಮಾಡಿದೆ. ಚೇತನಾ ರಾಜ್ ಸಾವಿನ ಬಗ್ಗೆ ಕನ್ನಡ ಚಿತ್ರರಂಗ ಹಾಗು ಕಿರುತೆರೆ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.