ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ. | JANATA NEWS
ಬೆಳಗಾವಿ : ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಹೈಕೋರ್ಟ್ನ ಧಾರವಾಡ ಪೀಠ ತೀರ್ಪು ನೀಡಿದೆ.
ಬೆಳಗಾವಿಯ ಕುವೆಂಪು ನಗರದಲ್ಲಿ 2015ರ ಆಗಸ್ಟ್ 16ರಂದು ನಸುಕಿನ ಜಾವ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರ ಬರ್ಬರ ಹತ್ಯೆಯಾಗಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿ ಕೊಲೆಯಾಗಿತ್ತು. ಕೊಲೆಯಾದ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆರೋಪಿ ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಕೊಲೆ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದ್ರೆ ಹೈಕೋರ್ಟ್ ಧಾರವಾಡ ಪೀಠ ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಏನಿದು ಪ್ರಕರಣ?
ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16 ರಂದು ನಸುಕಿನ ಜಾವ ತ್ರಿವಳಿ ಕೊಲೆ ನಡೆದಿತ್ತು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧ ಕಾರಣ ಎನ್ನಲಾಗಿತ್ತು.
ಕುವೆಂಪು ನಗರದಲ್ಲಿ ವಾಸವಾಗಿದ್ದ ರೀನಾ ಮಾಲಗತ್ತಿ ಹಾಗೂ ಯುವಕ ಪ್ರವೀಣ್ ಭಟ್ ನಡುವೆ ಸ್ನೇಹ ಸಲುಗೆ ಬೆಳೆದಿತ್ತು. ಎರಡು ವರ್ಷದವರೆಗೆ ಇಬ್ಬರ ಮಧ್ಯೆ ಅನೈತಿಕ ಸಂಬಂಧವಿತ್ತು. ಬಳಿಕ ಪ್ರವೀಣ ಅಂತರ ಕಾಯ್ದುಕೊಳ್ಳಲು ಯತ್ನಿಸಿದಕ್ಕೆ ರೀನಾ ತಕರಾರು ತೆಗೆದರು. ತನ್ನಿಂದ ದೂರಾದರೆ ಅನೈತಿಕ ಸಂಬಂಧದ ಸಂಗತಿಯನ್ನು ಬಹಿರಂಗ ಮಾಡುತ್ತೇನೆ ಎಂದೂ ಬೆದರಿಸಿದ್ದರು. ಈ ಸಂಗತಿಯೇ ಕೊಲೆಗೆ ಕಾರಣವೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿಚಾರಣೆ ನಡೆಸಿದ್ದ, ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪಿ ಪ್ರವೀಣ್ ಭಟ್ ತಪ್ಪಿತಸ್ಥ ಎಂದು ಹೇಳಿತ್ತು. ಅಲ್ಲದೇ ಜೀವಾವಧಿ ಶಿಕ್ಷೆಯನ್ನೂ ಕೂಡ ನೀಡಿತ್ತು. ಎಪ್ರಿಲ್ 16, 2018 ರಂದು ರಂದು ಜೀವಾವಧಿ ಶಿಕ್ಷೆಯನ್ನ ಪ್ರಕಟಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಪ್ರವೀಣ್ ಭಟ್, ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್, ಎಂಜಿಎಸ್ ಕಮಲ್ ಅವರಿಂದ ಪ್ರವೀಣ್ ಭಟ್ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.