ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಚಿವ ಮಧು ಬಂಗಾರಪ್ಪ | JANATA NEWS
ಬೆಂಗಳೂರು : ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ಶಾಲಾ ವಿದ್ಯಾರ್ಥಿಯ ಮೇಲೆ ಗಂಭೀರ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶಿಸಿದ್ದಾರೆ. ಶಿಕ್ಷಣ ಇಲಾಖೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭಾಗವಹಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಎನ್ನಲಾಗಿದೆ.
ಸಭೆಯ ಸಂದರ್ಭದಲ್ಲಿ ವಿದ್ಯಾರ್ಥಿ ಓರ್ವ ಮಾತನಾಡಿ, "ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ", ಎಂದಿರುವುದನ್ನು ಕೇಳಿಸಿಕೊಂಡ ಸಚಿವರು ಅಧಿಕಾರಿಗಳಿಗೆ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಆ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ! ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ. ", ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಈ ಪೋಸ್ಟ್ ನಲ್ಲಿ, "ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು," ಎಂದು ಒತ್ತಾಯಿಸಿದ್ದಾರೆ.