ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ, ನನಗೆ ತಿನ್ನಬೇಕು ಅನಿಸಿದರೆ ಖಂಡಿತ ತಿನ್ನುತ್ತೇನೆ? | Janata news
ಮೈಸೂರು : ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದರೆ, ನನಗೆ ತಿನ್ನಬೇಕು ಅನಿಸಿದರೆ ಖಂಡಿತ ತಿನ್ನುತ್ತೇನೆ. ಅದನ್ನು ಕೇಳೋಕೆ ಇವರ್ಯಾರು? ಆಹಾರ ನನ್ನ ಹಕ್ಕು. ಎನ್ನುವ ಮೂಲಕ ಮತ್ತೆ ಗೋಮಾಂಸ ಸೇವನೆ ಕುರಿತು ಬಿಜೆಪಿಗೆ ಸಿದ್ದರಾಮಯ್ಯ ಕುಟುಕಿದ್ದಾರೆ.
ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ. ಆದರೆ, ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೇನೆ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ, ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಯಾರಿಗೂ ಇಲ್ಲ. ನನಗೆ ಸೊಪ್ಪು ತಿನ್ನಬೇಕು ಅನಿಸಿದರೆ ಸೊಪ್ಪು ತಿನ್ನುತ್ತೇನೆ, ಮಾಂಸ ಬೇಕು ಅನಿಸಿದರೆ ಮಾಂಸ ತಿನ್ನುತ್ತೇನೆ ಎಂದು ಬಿಎಸ್ವೈಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಾನೇನಾದರೂ ಯಡಿಯೂರಪ್ಪನಿಗೆ ಮಾಂಸ ತಿನ್ನು ಎಂದು ಒತ್ತಾಯ ಮಾಡಿದ್ದೇನಾ? ಹಾಗೇ ಅವರೂ ನನ್ನನ್ನು ಮಾಂಸ ತಿನ್ನಬೇಡ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ ? ಅಮೇರಿಕಾದಲ್ಲಿ ಇರುವವರು ಗೋಮಾಂಸ ತಿಂತಾರೆ ಅವರೆಲ್ಲಾ ಪ್ರಾಣಿಗಳಾ? ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದ್ರೆ ಅವರೇಲ್ಲ ಪ್ರಾಣಿಗಳಾ? ನಿಮಗೆ ಸೋಪ್ಪು ಇಷ್ಟ ಇದ್ದರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನುವುದಕ್ಕೆ ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.