ಉಮೇಶ್ ಕತ್ತಿ ಉತ್ತರದ ವಿರುದ್ಧ ಭುಗಿಲೆದ್ದ ಜನಾಕ್ರೋಶ: ಕ್ಷಮೆಯಾಚಿಸಿದ ಉಮೇಶ್ ಕತ್ತಿ | ಜನತಾ ನ್ಯೂಸ್
ಬೆಳಗಾವಿ : ಪಡಿತರ ಅಕ್ಕಿಗೆ ಸಂಬಂಧಿಸಿದಂತೆ ರೈತರೊಬ್ಬರಿಗೆ ತಾವು ನೀಡಿದ ದರ್ಪದ ಉತ್ತರಕ್ಕೆ ಕೊನೆಗೂ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಇಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.
ಉಮೇಶ್ ಕತ್ತಿ ಅವರ ಈ ದರ್ಪದ ಹೇಳಿಕೆ ವಿರುದ್ಧ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಇದು ಅಧಿಕಾರದಲ್ಲಿರುವವ ವಿಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹಲವರು ಟೀಕಿಸಿದ್ದರು.
ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಈ ಹೇಳಿಕೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಉಮೇಶ್ ಕತ್ತಿ ಕೊನೆಗೂ ಎಲ್ಲಾ ರೈತರ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ, ನನ್ನ ಹೇಳಿಕೆ ನೋವು ನೀಡಿದ್ದಲ್ಲಿ ನಾನು ರಾಜ್ಯದ ರೈತರಲ್ಲಿ ಹಾಗೂ ಎಲ್ಲಾ ಪಡಿತರ ಫಲಾನುಭವಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.