ಸುಮಕ್ಕಾ ಎಲ್ಲಿದ್ದೀಯಾಕ್ಕಾ? ಜಾಲತಾಣದಲ್ಲಿ ಪೋಸ್ಟರ್ ವೈರಲ್: ಸಕ್ಕರೆ ನಾಡಿನ ಜನರ ಆಕ್ರೋಶ | ಜನತಾ ನ್ಯೂಸ್
ಮಂಡ್ಯ : ಕಾಣೆಯಾಗಿದ್ದಾರೆ ಸ್ವಾಭಿಮಾನಿ ಸಂಸದೆ, ಸುಮ್ಮಕ್ಕಾ ಎಲ್ಲಿದ್ದೀಯಕ್ಕಾ? ಕರೊನಾದಿಂದ ಮಂಡ್ಯ ಜನತೆ ಪರದಾಡುತ್ತಿದ್ದರೂ ಎರಡು ತಿಂಗಳಿಂದ ಮಂಡ್ಯಕ್ಕೆ ಸಂಸದೆ ಕಾಲಿಟ್ಟಿಲ್ಲ… ಎಂಬ ಪೋಸ್ಟಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ, ಯಾರಿಗೆ ಯಾವ ಸಮಸ್ಯೆ ಇದೆ ಎಂಬ ಯಾವುದೇ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದೇ ರೀತಿ ಕಳೆದ 54 ದಿನಗಳಿಂದ ಮಂಡ್ಯದತ್ತ ಸಂಸದೆ ಸುಮಲತಾ ಮುಖಮಾಡಿಲ್ಲವಂತೆ. ಹೀಗಾಗಿ ಸಂಸದೆ ಸುಮಲತಾ ನಡೆಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದ ಮಂಡ್ಯದ ಜನತೆ ಪರದಾಡುತ್ತಿರುವ ಸಮಯದಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂದು ಆಕ್ಷೇಪಿಸಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಚುನಾವಣೆ ವೇಳೆ ಜಿಲ್ಲೆಯ ಜನರೊಂದಿಗೆ ಇರುವುದಾಗಿ, ಜನರ ಕಷ್ಟ-ಸುಖಕ್ಕೆ ಸ್ಪಂದಿಸುವುದಾಗಿ ಹೇಳಿದ್ದ ಸುಮಕ್ಕಾ, ಕ್ಷೇತ್ರಕ್ಕೆ ಎರಡು ತಿಂಗಳಿಂದ ಕಾಲಿಟ್ಟಿಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ಸಾರ್ವಜನಿಕರು ಪ್ರಶ್ನಿಸಿದ ಬಳಿಕ ಎಚ್ಚೆತ್ತ ಸುಮಲತಾ ಇಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ.