ಅಮ್ಮ ಬಿಟ್ಟು ಹೋದರು, ಅಮ್ಮನ ನೆನಪು ಮೊಬೈಲ್ನಲ್ಲಿದೆ ದಯವಿಟ್ಟು ಹುಡುಕಿಕೊಡಿ! | ಜನತಾ ನ್ಯೂಸ್
ಕೊಡಗು : ಕೋವಿಡ್ನಿಂದಾಗಿ ಮೃತಪಟ್ಟ ತಾಯಿಯೊಬ್ಬರ ಪುತ್ರಿ ಈಗ ನಮ್ಮ ತಾಯಿಯ ಮೊಬೈಲ್ ಹುಡುಕಿಕೊಡಿ ಎಂದು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ಶಾಸಕರಿಗೆ ಪತ್ರ ಬರೆದಿದ್ದಾಳೆ. ಅಮ್ಮನ ನೆನಪುಗಳಿರುವ ಮೊಬೈಲ್ಅನ್ನು ಹುಡುಕಿಕೊಡಿ ಎಂಬ ಅವಳ ಅಹವಾಲು ಕರುಳು ಹಿಂಡುವಂತಿದೆ.
ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆ ತಾಯಿಗೆ ಇತ್ತೀಚೆಗೆ ಕರೊನಾ ಸೋಂಕು ತಗುಲಿತು. ಅವಳೂ ಮತ್ತು ದಿನಗೂಲಿ ನೌಕರರಾದ ತಂದೆ ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚಿಕಿತ್ಸೆ ಪಡೆದರೆ, ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16 ರಂದು ಚಿಕಿತ್ಸೆ ಫಲಿಸದೆ ಆಕೆಯ ತಾಯಿ ಮೃತಪಟ್ಟರು.
ಪತ್ರದಲ್ಲಿ ಏನಿದೆ?
15 ದಿನಗಳ ಹಿಂದೆ ನಮ್ಮ ಅಮ್ಮ-ಅಪ್ಪ ನಾನು ಕೋವಿಡ್ಗೆ ತುತ್ತಾಗಿದ್ದು, ಅಮ್ಮನಿಗೆ ರೋಗ ಹೆಚ್ಚಾಗಿದ್ದ ಕಾರಣ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನು ಮತ್ತು ಅಪ್ಪ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆವು. ಅಪ್ಪ ದಿನಗೂಲಿ ನೌಕರಾಗಿದ್ದು ಅಕ್ಕ ಪಕ್ಕದವರ ಸಹಾಯದಿಂದ ಜೀವನ ಮಾಡಿದೆವು.
ಮೇ16ರಂದು ಅಮ್ಮ ಮೃತರಾದರು. ಅವರ ಜೊತೆಯಲ್ಲಿ ಇದ್ದ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿದ್ದಾರೆ. ನಾನು ತಬ್ಬಲಿಯಾಗಿದ್ದು ನನ್ನ ತಾಯಿಯ ನೆನಪುಗಳು ಅ ಮೊಬೈಲ್ನಲ್ಲಿದೆ, ಆದ್ದರಿಂದ ಯಾರಾದ್ರು ತೆಗೆದುಕೊಂಡಿದ್ರೆ ಅಥವಾ ಸಿಕ್ಕಿದ್ರೆ ಈ ತಬ್ಬಲಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಮಡಿಕೇರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾಳೆ. ಹಾಗೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾಳೆ..