ಮೇ.25ರಿಂದ ಜೂ.7ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ | ಜನತಾ ನ್ಯೂಸ್
ಉಡುಪಿ : ಜಿಲ್ಲೆಯಲ್ಲಿ ನಾಳೆಯಿಂದ (ಮೇ.25) ಜೂನ್ 7ರವರೆಗೆ ಯಾವುದೇ ಮದುವೆ ಸಮಾರಂಭಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವರ ಜೊತೆ ಸಭೆ ಮಾಡಿದ್ದೇವೆ. ಮದುವೆ ಸಮಾರಂಭಗಳ ಬಳಿಕ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದೆ. ಹೀಗಾಗಿ ಮದುವೆಗೆ ಇಂದು ಸಂಜೆಯವರೆಗೆ ನೀಡಲಾದ ಅನುಮತಿ ಮಾತ್ರ ಮಾನ್ಯವಾಗಿರುತ್ತದೆ. ಜೂ.7ರವರೆಗೆ ಮದುವೆ ಸಮಾರಂಭಗಳಿಗೆ ಅನುಮತಿ ಇಲ್ಲ. ನಿಶ್ಚಿತಾರ್ಥ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದರು.
ಮದುವೆಗಳಿಂದಲೇ ಕೊರೊನಾ ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಮದುವೆಗಳಿಂದ ಕೊಂಚ ದೂರ ಇರಿ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದಷ್ಟು ಸಂಭ್ರಮದ ಕಾರ್ಯಕ್ರಮಗಳಿಂದ ದೂರ ಇರಿ ಎಂದು ತಿಳಿಸಿದ್ದಾರೆ.
ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ. ಆದಷ್ಟು ಮದುವೆಗಳನ್ನು ಮುಂದೂಡಿದರೆ ಒಳಿತು. ಮದುವೆ ಕಾರ್ಯಕ್ರಮದಲ್ಲಿ ಯಾರೂ ಭಾಗವಹಿಸದಿರಿ ಎಂದು ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಡಿಸಿ ಕರೆ ಕೊಟ್ಟಿದ್ದಾರೆ.