ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಮಹಿಳೆ ಮೇಲೆ ಹರಿದ ಲಾರಿ, ಕಾರ್ಮಿಕ ಮಹಿಳೆ ಸಾವು! | ಜನತಾ ನ್ಯೂಸ್
ವಿಜಯಪುರ : ಲಾರಿ ಹರಿದು ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ನಿಡಗುಂದಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಲಕ್ಷ್ಮೀ ಬಿರಾದಾರ್ (45) ಮೃತ ಮಹಿಳೆ. ಈಕೆ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಹೆದ್ದಾರಿಯ ಎಡಬದಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿತ್ತು. ಲಕ್ಷ್ಮೀ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾಮಗಾರಿಯಲ್ಲಿ ತೊಡಗಿದ್ದ ಮಹಿಳೆ ಮೇಲೆ ಲಾರಿ ಹರಿದಿದೆ ಎನ್ನಲಾಗಿದೆ. ದುರಸ್ತಿ ನಡೆಯುತ್ತಿದ್ದ ರಸ್ತೆಯಲ್ಲಿ ಸೂಚನಾ ಫಲಕವನ್ನು ಇಡಲಾಗಿತ್ತಾದರೂ ಅದನ್ನು ಗುದ್ದಿಸಿ ಮಹಿಳೆ ಮೇಲೆ ಲಾರಿ ಹರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.