ಮಾರಿ ಪೂಜೆಯಲ್ಲಿ ಮುಸ್ಲಿಮರಿಗೆ ಅಂಗಡಿ ನೀಡದಿರಲು ಕಾಪು ಪುರಸಭೆಗೆ ಮನವಿ | JANATA NEWS
ಉಡುಪಿ : ಕರಾವಳಿ, ಮಲೆನಾಡು ಜಿಲ್ಲೆಯಲ್ಲಿ ಹಿಂದೂಪರ ಸಂಘಟನೆಗಳಿಂದ ವ್ಯಾಪಾರ ಬಹಿಷ್ಕಾರ ಚಳುವಳಿ ಮಾಡಲು ಕರೆ ನೀಡಿದೆ.
ಉಡುಪಿಯ ಧಾರ್ಮಿಕ ಕೇಂದ್ರಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಅವಕಾಶ ಕೊಡಬೇಡಿ, ಕೋರ್ಟ್ ತೀರ್ಪಿಗೆ ಬೆಲೆ ಕೊಡದವರ ಅವರ ವಿರುದ್ಧ ಹೋರಾಟ, ಒಂದು ದಿನ ಬಂದ್ ಮಾಡಿದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚೋಣ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿದ್ದಾರೆ.
ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿಗಳನ್ನು ನೀಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೂರು ಮಾರಿಗುಡಿಗಳ ಆಡಳಿತ ಮಂಡಳಿಗೆ ಶುಕ್ರವಾರ ಮನವಿ ಮಾಡಿದ್ದಾರೆ.
ಹಿಂದೂ ಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಹೊಸ ಮಾರಿಗುಡಿಯ ಮುಂಭಾಗದಲ್ಲಿ ಜಮಾಯಿಸಿ, ಯಾವುದೇ ಕಾರಣಕ್ಕೂ ಮಾರಿಗುಡಿ ಸುತ್ತಲಿನ ಪ್ರದೇಶದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕಲು ಅವಕಾಶ ಮಾಡಿಕೊಡದಂತೆ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.
ಕಾಪುವಿನ ಪ್ರಸಿದ್ಧ ಮೂರು ಮಾರಿಗುಡಿಗಳಲ್ಲಿ ನಡೆಯುವ 'ಸುಗ್ಗಿ ಮಾರಿ ಪೂಜೆ' ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಡಿ ಎಂದು ಹಿಂದೂ ಕಾರ್ಯಕರ್ತರು ಕಾಪು ಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 22 ಮತ್ತು ಮಾರ್ಚ್ 23ರಂದು ನಡೆಯಲಿರುವ ಈ ಕಾರ್ಯಕ್ರಮದ ಉತ್ಸವದಂದು ಅನ್ಯ ಸಮುದಾಯದವರು ಜಾತ್ರೆಯಲ್ಲಿ ತಮ್ಮ ಅಂಗಡಿ ಮುಚ್ಚಬೇಕು ಒಂದು ವೇಳೆ ಅಂಗಡಿ ತೆರೆಯಲು ಅವಕಾಶ ನೀಡಿದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.