ಇನ್ಸ್ಪೆಕ್ಟರ್ ನಂದೀಶ್ ಸಾವು ಕೇಸ್ ಗೆ ಟ್ವಿಸ್ಟ್ : ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಎಂಟಿಬಿ | JANATA NEWS
ರಾಯಚೂರು : ಪೋಸ್ಟಿಂಗ್‍ಗೆ 60-70 ಲಕ್ಷ ರೂ. ಕೊಟ್ಟು ಬಂದ್ರೆ ಹೃದಯಾಘಾತ ಆಗದೆ ಇನ್ನೇನಾಗುತ್ತೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ನಂದೀಶ್ ಸಾವು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ರಾಯಚೂರಿನಲ್ಲಿ ಕನಕದಾಸ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿನ ಬಳಿಕ ನಾನು ನೋಡಲು ಹೋಗುವಾಗ ಹಿಂದೆ ಕಾರ್ಯಕರ್ತರು ಬರುತ್ತಿದ್ದರು. ಯಾಕೆ ಇಂತಹ ತೀರ್ಮಾನ ತಗೊಂಡ ಅಂತ ಹೇಳುತ್ತಾ ಬರುತ್ತಿದ್ದರು. 70-80 ಲಕ್ಷ ಖರ್ಚು ಮಾಡಿಬಿಟ್ಟೆ ಅಂತ ಟೆನ್ಷನ್‍ನಲ್ಲಿ ಇದ್ದೆ ಅಂತ ಹೇಳ್ತಿದ್ನಂತೆ. ಇಲ್ಲಿ ಏನ್ ಮಾಡಬೇಕು ಅಂತ ಖರ್ಚು ಮಾಡ್ದ, ಅಂತ ಹೇಳ್ದೆ ಅಷ್ಟೇ ಎಂದು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಲಾಗಿತ್ತು ಎಂಬ ಬಗ್ಗೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಪಿಐ ನಂದೀಶ್ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಈಗ ಯಾವ್ಯಾವುದಕ್ಕೋ ಲಿಂಕ್ ಮಾಡಿ ಮಾತಾಡುವುದು ಸರಿಯಲ್ಲ. ಕ್ಯಾಬರೆ, ಇಸ್ಪೀಟ್ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು ಸೂಚನೆ ನೀಡಲಾಗಿತ್ತು. ಕೆಲವು ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಓಪನ್ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ ಬಂದ್ ಆಗಬೇಕೆಂದು ಸೂಚನೆ ನೀಡಲಾಗಿತ್ತು. ಅಕ್ರಮ ನಡೆಯುತ್ತಿದ್ರೆ ಸ್ಥಳೀಯ ಅಧಿಕಾರಿ ಹೊಣೆಮಾಡುವಂತೆ ಹೇಳಿದ್ದೆ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಸೂಡಾನ್ ದೇಶದ 20 ಪ್ರಜೆಗಳು ಭಾಗವಹಿಸಿದ್ದರು. ಸಿಸಿಬಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಕಮಿಷನರ್, ನಂದೀಶ್ ಅವರನ್ನು ಅಮಾನತು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ನನಗೆ ಮಾಹಿತಿ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.