ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡಿಸುವುದಾಗಿ ಹೇಳಿ ಚಿನ್ನಾಭರಣ ಕದ್ದು ಎಸ್ಕೇಪ್ | JANATA NEWS
ರಾಮನಗರ : ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪದಲ್ಲಿ ನಡೆದಿದೆ.
ಸಾವಿತ್ರಮ್ಮ (62) ವಂಚನೆಗೊಳಗಾದ ವೃದ್ಧ ಮಹಿಳೆ. ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ನಿವಾಸಿಯಾಗಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಮಗನನ್ನು ನೋಡಲು ವೃದ್ಧೆ ಬಂದಿದ್ದರು. ವೃದ್ಧೆ ಒಂಟಿಯಾಗಿರುವುದನ್ನು ಗಮನಿಸಿದ ಖದೀಮ, ಗೃಹಲಕ್ಷ್ಮಿ ನೊಂದಣಿ ಮಾಡಿಸಿದ್ದೀರಾ? ಎಂದು ಪ್ರಶ್ನಿಸಿದ್ದಾನೆ. ಇಲ್ಲ ಎಂದು ವೃದ್ಧೆ ಉತ್ತರಿಸಿದ್ದಾಳೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಕಳ್ಳ ವೃದ್ಧೆಗೆ ನಂಬಿಕೆ ಬರುವಂತೆ ಮಾತನಾಡಿದ್ದಾನೆ.
ಪೋಸ್ಟ್ ಆಫಿಸ್ನಿಂದ ಹಣ ಬರುವ ಹಾಗೆ ಮಾಡಿಸುತ್ತೇನೆಂದು ನಂಬಿಸಿ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾನೆ. ಕಣ್ಣು ಪರೀಕ್ಷೆ ಮಾಡಿಸಬೇಕು, ಚಿನ್ನಾಭರಣ ತೆಗೆದು ಕೋಡಿ ಎಂದು ಹೇಳಿದ್ದಾನೆ.
ಆತನ ಮಾತು ನಂಬಿದ ವೃದ್ಧೆ, ಎರಡೂವರೆ ಲಕ್ಷ ಬೆಲೆಬಾಳುವ 40 ಗ್ರಾಂ ಚಿನ್ನಾಭರಣವನ್ನು ಆತನ ಕೈಗೆ ಇಟ್ಟಿದ್ದಾಳೆ. ನಂತರ ಆಕೆಯನ್ನು ಯಾಮಾರಿಸಿ ಚಿನ್ನಾಭರಣ ದೋಚಿದ ಖದೀಮ ಎಸ್ಕೇಪ್ ಆಗಿದ್ದಾನೆ.