ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ.. - ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು | JANATA NEWS

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ದುರಂತ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವಾಗ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪ್ರತಿದಾಳಿ ನಡೆಸಿ, ಕೇಸರಿ ಪಕ್ಷವು ತನ್ನದೇ ಆದ ಆಡಳಿತದಲ್ಲಿ ಹೊಣೆಗಾರಿಕೆಯನ್ನು ನಿರ್ಲಕ್ಷಿಸುತ್ತಾ ಸಾವುಗಳನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಎಕ್ಸ್ ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, "ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾದಲ್ಲಿ ಹತ್ಯಾಕಾಂಡ ನಡೆದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ, ವಿಮಾನ ಅಪಘಾತ, ರೈಲ್ವೇ ದುರಂತಗಳು ಸಾಲು ಸಾಲು ನಡೆದು ಎಷ್ಟೋ ಜನ ಬಲಿಯಾಗಿದ್ದಾರೆ, ಮಣಿಪುರ ಕಳೆದ ಕೆಲವು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ, ಅಲ್ಲಿ ನಿತ್ಯವೂ ಜನ ಸಾಯುತ್ತಿದ್ದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸೇತುವೆ ಕುಸಿದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆಗೆಲ್ಲ ಘಟನೆಯ ಹೊಣೆಹೊತ್ತು ಬಿಜೆಪಿಯವರು ರಾಜೀನಾಮೆ ನೀಡಿದ್ದಾರ? ಇದು ಸಮರ್ಥನೆ ಅಲ್ಲ, ವಾಸ್ತವಾಂಶ. ಸಾವು- ನೋವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.", ಎಂದು ಹೇಳಿದ್ದಾರೆ.