ತಂದೆಯಿಂದಲೇ 1 ವರ್ಷ 4 ತಿಂಗಳ ಕಂದಮ್ಮನ ಮೇಲೆ ಮಚ್ಚಿನಿಂದ ಹಲ್ಲೆ! | Janata news
ಬೆಂಗಳೂರು : ಕುಡಿದ ಅಮಲಿನಲ್ಲಿದ್ದ ತಂದೆಯೇ ಒಂದೂವರೆ ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದರಿಂದಾಗಿ ಕೋಮಾ ಸ್ಥಿತಿ ತಲುಪಿದ ಮಗು, ಝೀರೋ ಟ್ರಾಫಿಕ್ ಮೂಲಕ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆತರಲಾಗಿದೆ.
ಒಂದೂವರೆ ವರ್ಷದ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.
ಹಿರಂನಾಜ್ ಹಲ್ಲೆಗೊಳಗಾದ ಒಂದು ವರ್ಷ ನಾಲ್ಕು ತಿಂಗಳಿನ ಹೆಣ್ಣು ಮಗು. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ವೇದಾನಗರ ನಿವಾಸಿ ಜೀಷನ್ ಮತ್ತು ಹಾಜರಾ ಬಾನು ದಂಪತಿಯ ಮಗುವಾಗಿದೆ. ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜೀಷನ್ ಹಾಗೂ ಹಾಜರಾ ಬಾನು ದಂಪತಿ ನಡುವೆ ಜಗಳ ನಡೆದಿದೆ.
ಕುಡಿದ ಅಮಲಿನಲ್ಲಿದ್ದ ಮಗುವಿನ ತಂದೆ ಜೀಷನ್ ಪತ್ನಿ ಹಾಜರಾಬಾನು ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಮಚ್ಚಿನ ಏಟು ಮಗುವಿನ ಮೇಲೆ ಬಿದ್ದಿದ್ದು, ಕಂದಮ್ಮ ಗಂಭೀರವಾಗಿ ಗಾಯಗೊಂಡಿದೆ. ಮಗುವಿನ ತಲೆಗೆ ಪೆಟ್ಟು ಬಿದ್ದ ತಕ್ಷಣ ಗಂಭೀರ ಗಾಯವಾಗಿ ಕೋಮಾ ಸ್ಥಿತಿಗೆ ತಲುಪಿದೆ.
ಈ ಬಗ್ಗೆ ಕಡೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.