ಕೊರೊನಾ ಸೋಂಕಿತ ಗರ್ಭಿಣಿಗೆ ಆಸ್ಪತ್ರೆಯಲ್ಲಿ ಹೆರಿಗೆ ಯಶಸ್ವಿ: ಮಗು ನೋಡಲು ತಂದೆಯೂ ಬರಲಿಲ್ಲ! | Janata news
ಗದಗ : ಸೋಂಕಿಗೀಡಾಗಿದ್ದ ಮಹಿಳೆಗೆ ಹೆರಿಗೆಯಾಗಿದ್ದು ಕೊರೊನಾ ಮಹಾಮಾರಿ ಈ ತಾಯಿ-ಮಗುವನ್ನು ದೂರ ಮಾಡಿದೆ. ತಾಯಿ ಇದ್ರೂ ಎದೆಹಾಲು ಕುಡಿಸುವ ಹಾಗಿಲ್ಲ, ಮಗುವಿನ ಮುಖವನ್ನ ನೋಡಿಲ್ಲ.
ತಂದೆ ಮಗುವಿನ ಮುಖವೇ ನೋಡಲು ಬಂದಿಲ್ಲ. ಹೆರಿಗೆಯಾದ ಸಂದರ್ಭದಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬದವರ ಸುಳಿವಂತೂ ಇಲ್ವೇ ಇಲ್ಲ.
ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಗರ್ಭಿಣಿ ಎರಡು ದಿನದ ಹಿಂದೆ ಚಿಕಿತ್ಸೆಗೆಂದು ಒಬ್ಬಂಟಿಯಾಗಿ ಜಿಮ್ಸ್ ಆಸ್ಪತ್ರೆಗೆ ಬಂದಿದ್ದಳು.
ಆಕೆಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ. ಆದರೆ, ಸರಣಿ ಪರೀಕ್ಷೆ ಮಾಡಿದ ಬಳಿಕ ಸೋಂಕು ತಗುಲಿರುವುದು ದೃಡವಾಗಿತ್ತು. ವರದಿ ಬಂದ ತಕ್ಷಣ ಜಿಮ್ಸ್ ವೈದ್ಯರು ಆಕೆಗೆ ಹೆರಿಗೆ ಮಾಡಿಸುವ ನಿರ್ಧಾರಕ್ಕೆ ಬಂದರು.
ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ, ಮಗು 2.7 ಕೆ.ಜಿ ತೂಕ ಇತ್ತು. ಹಸುಗೂಸಿಗೆ ಸ್ವಲ್ಪ ಉಸಿರಾಟದ ತೊಂದರೆ ಇದ್ದುದರಿಂದ ಪ್ರತ್ಯೇಕವಾಗಿ ಐಸಿಯು ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ತಾಯಿಗೆ ಕೊರೊನಾ ಸೋಂಕು ಇರುವ ಕಾರಣ ಮಗುವಿಗೆ ಸೋಂಕು ಪಸರಿಸುವ ಸಂಭವ ಕಡಿಮೆ ಇದೆ ಎಂದು ವೈದ್ಯ ಡಾ. ಶಿವನಗೌಡ ಜೋಳದರಾಶಿ ಹೇಳುತ್ತಾರೆ.
ಆದರೂ ಮಗುವಿನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವೇಳೆ ಮಗುವಿಗೆ ನೆಗೆಟಿವ್ ಬಂದರೆ ಕುಟುಂಬದವರಿಗೆ ಮಗುವನ್ನು ನೋಡಲು ಅವಕಾಶ ಮಾಡಿಕೊಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.