ಬೇಸಿಗೆಯ ದಾಹವನ್ನು ತಣಿಸುವ ಪಾನಕಗಳು | Janata news
- : ಸಾಮಾನ್ಯವಾಗಿ ಬೇಸಿಗೆಯಲ್ಲಿ ರುಚಿ ರುಚಿಯಾದ ತಂಪಾದ, ಹಿತವಾದ ಪಾನಕಗಳನ್ನು ಮಾಡಿ ಕುಡಿದರೆ ದೇಹದಲ್ಲಿಯೂ ನೀರಿನಂಶದ ಕೊರತೆಯಾಗುವುದಿಲ್ಲ ಮತ್ತು ನಿರ್ಜಲೀಕರಣದ ಸಮಸ್ಯೆಯೂ ಎದುರಾಗುವುದಿಲ್ಲ. ಕಂಡಕಂಡಲ್ಲಿ ಶುಚಿಯಿಲ್ಲದ ನೀರಿನಿಂದ ತಯಾರಿಸಿದ ಪಾನಕ ಸೇವಿಸಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತಾ, ಮನೆಯಲ್ಲೇ ತಯಾರಿಸಬಹುದಾದ, ಆರೋಗ್ಯವರ್ಧಕ ಪಾನಕಗಳು ಯಾವವು ಎನ್ನುವುದನ್ನು ತಿಳಿದುಕೊಳ್ಳೋಣ.
ರಾಗಿ ಪಾನಕ : ಅರ್ಧ ಬಟ್ಟಲು ರಾಗಿ ಹಿಟ್ಟಿಗೆ ಎರಡು ಲೋಟ ನೀರು, ಅರ್ಧ ಬಟ್ಟಲು ಬೆಲ್ಲ ಮತ್ತು ಅರ್ಧ ಬಟ್ಟಲು ಹಾಲು ಹಾಕಿ ಬೆರೆಸಿದರೆ ರಾಗಿ ಪಾನೀಯ ಸಿದ್ಧವಾಗುತ್ತದೆ. ಈ ಪಾನಕದ ರುಚಿ ಹೆಚ್ಚಿಸಲು ಏಲಕ್ಕಿ ಪುಡಿಯನ್ನು ಬೆರೆಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
ನೆಲ್ಲಿಕಾಯಿ ಪಾನಕ : ನೆಲ್ಲಿಕಾಯಿಯನ್ನು ಬೀಜದಿಂದ ಬೇರ್ಪಡಿಸಿ. ಅದಕ್ಕೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಅನಂತರ ಸೋಸಿ ಕುಡಿಯಿರಿ.
ಹೆಸರುಬೇಳೆ ಪಾನಕ: ಹೆಸರು ಕಾಳನ್ನು ಸ್ವಲ್ಪ ಹೊತ್ತು ನೆನೆಹಾಕಿ ಅನಂತರ ಅದನ್ನು ರುಬ್ಬಿ ಅಗತ್ಯವಿರುವಷ್ಟು ನೀರು ಹಾಗೂ ಬೆಲ್ಲ ಸೇರಿಸಿಕೊಂಡು ಸೋಸಿ ಅಥವಾ ಹಾಗೆಯೇ ಕುಡಿಯಬಹುದು. ಇದೇ ರೀತಿ ಎಳ್ಳು ಪಾನಕವನ್ನು ಮಾಡಬಹುದು.
ಮುರುಗಲ ಪಾನಕ : ಮುರುಗಲು ಹಣ್ಣುಗಳನ್ನು ನೀರಿನಲ್ಲಿ ಗಿವುಚಿ ಅಗತ್ಯವಿರುವಷ್ಟು ಸಕ್ಕರೆ ಸೇರಿಸಿ. ಬೇಕೆನಿಸಿದರೆ ಏಲಕ್ಕಿ ಪುಡಿ ಸೇರಿಸಿ ಕುಡಿಯಿರಿ. ಇದರ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರ್ಷವಿಡೀ ಬಳಸಬಹುದು. ಈ ಪಾನಕವು ಪಿತ್ತನಾಶಕ ಮತ್ತು ರಕ್ತ ಶುದ್ಧೀಕರವಾಗಿ ಕೆಲಸ ಮಾಡುತ್ತದೆ.
ಬೇಲದ ಹಣ್ಣಿನ ಪಾನಕ : ಬೇಲದ ಹಣ್ಣನ್ನು ಒಡೆದು ಅದರೊಳಗಿರುವ ತಿರುಳಿಗೆ ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಒಮ್ಮೆ ತಿರುವಿ. ಆಮೇಲೆ ಸೋಸಿ ಕುಡಿದು ನೋಡಿ.